ಶತಮಾನಗಳಿಂದ ಯುಗಾಂಡ ಮತ್ತು ಸೊಮಾಲಿಯಾ ಅದೇ ರೀತಿ ಇದೆ. ಯಾಕೆಂದರೆ ಅಲ್ಲಿನ ಅರಾಜಕತೆ. ವರ್ಗ ಸಂಘರ್ಷ, ಜನಾಂಗೀಯ ಗಲಭೆ, ಭಯೋತ್ಪಾದನೆ ಅಲ್ಲಿನ ಜನರನ್ನು ನರಕಕ್ಕೆ ತಳ್ಳುವಂತೆ ಮಾಡಿದೆ.
ಕೋಮು ಗಲಭೆ, ಜನಾಂಗೀಯ ಘರ್ಷಣೆ, ಭಯೋತ್ಪಾದನೆ ಎನ್ನುವುದು ಕೇವಲ ಸೊಮಾಲಿಯಾ ಅಥವಾ ಯುಗಾಂಡಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳನ್ನೂ ಇದು ಬಿಟ್ಟಿಲ್ಲ. ಆಹಾರ, ಸಾಕ್ಷರತೆ, ಆರೋಗ್ಯಕ್ಕಾಗಿ ನಡೆಯಬೇಕಾದ ಚಳವಳಿ ಜೀವವಿರೋಗಳ ಕೈಗೆ ಸಿಕ್ಕಿದಾಗ ಕೋಮು ಗಲಭೆ, ಜನಾಂಗೀಯ ಘರ್ಷಣೆ, ಭಯೋತ್ಪಾದನೆ ತಲೆ ಎತ್ತುತ್ತದೆ. ಮನುಷ್ಯ- ಮನುಷ್ಯರ ನಡುವಿನ ಸಂಬಂಧಕ್ಕೆ ಮೊದಲ ಆದ್ಯತೆ ನೀಡಬೇಕಾದ ನಾವು ಮನುಷ್ಯ- ದೇವರ ನಡುವಿನ ಸಂಬಂಧಕ್ಕೆ ಮೊದಲ ಆದ್ಯತೆ ನೀಡುವುದೇ ಇದಕ್ಕೆ ಮುಖ್ಯ ಕಾರಣ. ನಾವು ಏನಿದ್ದರೂ ಮೊದಲು ಮಾನವ ಸಂಬಂಧಕ್ಕೆ ಮೊದಲ ಪ್ರಾಮುಖ್ಯತೆ ನೀಡಬೇಕು, ಎರಡನೆಯದಾಗಿ ಮನುಷ್ಯ- ಪ್ರಕೃತಿ ನಡುವಿನ ಸಂಬಂಧಕ್ಕೆ ಗಮನ ನೀಡಬೇಕು. ಹಸಿರು ಉಳಿದಾಗ ಮಾತ್ರ ನಾವು ಉಸಿರಾಡಲು ಸಾಧ್ಯ. ಮೂರನೆ ಯದು ಮನುಷ್ಯ- ದೇವರ ನಡುವಿನ ಸಂಬಂಧ. ಆದರೆ ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ನಾವು ಮನುಷ್ಯ- ಮನುಷ್ಯರ ನಡುವಿನ ಸಂಬಂಧಕ್ಕೆ ಬದಲಾಗಿ ಮನುಷ್ಯ- ದೇವರ ನಡುವಿನ ಸಂಬಂಧಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ನಮ್ಮದೇ ಧರ್ಮ ಶ್ರೇಷ್ಠ ಅಂಥ ಹೊಡೆದಾಡಿಕೊಳ್ಳುತ್ತೇವೆ. ವಾಸ್ತವವಾಗಿ ಯಾರೇ ಆಗಲಿ ಯಾವುದೇ ಜಾತಿ ಅಥವಾ ಧರ್ಮದಲ್ಲಿ ಅರ್ಜಿ ಹಾಕಿ ಹುಟ್ಟುವುದಿಲ್ಲ. ಹ೨ಟ್ಟು ಎನ್ನುವುದು ಆಕಸ್ಮಿಕ. ಇದನ್ನು ಮೊದಲು ಅರಿತುಕೊಂಡರೆ ಯಾವುದೇ ಕೋಮುಗಲಭೆ, ಜನಾಂಗೀಯ ಕಲಹ, ಭಯೋತ್ಪಾದನೆಗೆ ಅವಕಾಶ ಸಿಗುವುದಿಲ್ಲ.
ವಿಜಯ ಕರ್ನಾಟಕದ 'ಮುಂದೆ ಸಾಗೋಣ ಮಂಗಳೂರು' ಅಭಿಯಾನದ ಅಂಗವಾಗಿ ಅ. ೨೪ರಂದು ಪ್ರಕಟವಾದ 'ಐಕ್ಯವೊಂದೇ ಮಂತ್ರ' ಪುಟ ಈ ನಿಟ್ಟಿನಲ್ಲಿ ಶ್ಲಾಘನೀಯ ಪ್ರಯತ್ನ. ಗಲಭೆ, ದೊಂಬಿ, ಭಯೋತ್ಪಾದನೆಯಿಂದ ಯಾವುದೇ ನಗರವಾಗಲಿ, ರಾಜ್ಯವಾಗಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವರ್ಷಕ್ಕೆ ಒಂದು ಬಾರಿ ನಡೆಯುವ ಕೋಮುಗಲಭೆಯಿಂದ ನಾವು ಅಭಿವೃದ್ಧಿ ದೃಷ್ಟಿಯಲ್ಲಿ ಕನಿಷ್ಠ ೧೦ ವರ್ಷಗಳಷ್ಟು ಹಿಂದೆ ಹೋಗುತ್ತೇವೆ. ಸೌಹಾರ್ದ ಎನ್ನುವುದು ಮನುಷ್ಯನ ಹೃದ ಯದಿಂದ ಹುಟ್ಟುವಂತದ್ದು. ಇದು ಬೆಂಕಿ ಹಚ್ಚುವ ಗಣ್ಯರು ಶಾಂತಿ ಸಭೆಯಲ್ಲಿ ಸೌಹಾರ್ದ ಕುರಿತು ಮಾತನಾಡಿದಂತಾಗ ಬಾರದು. ಕಟ್ಟಾ ಮೂಲಭೂತವಾದಿ ಯೊಬ್ಬ ವೇದಿಕೆ ಸಿಕ್ಕಿದಾಗ ಸಾಮgಸ್ಯದ ಕುರಿತು ಭಾಷಣ ಬಿಗಿದಂತಾಗಬಾರದು. ನಮ್ಮ ದೇಶದಲ್ಲಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡುವ ಸಾಕಷ್ಟು ಕೋರ್ಸ್‌ಗಳು ಈಗಾಗಲೇ ಇವೆ. ಇನ್ನು ನಮಗೆ ಬೇಕಾಗಿ ರುವುದು ಏನಿದ್ದರೂ ಮಾನವೀಯತೆ ಯನ್ನು ಕಲಿಸುವ ಕೋರ್ಸ್ ಮಾತ್ರ.
- ಲತಾ ಎ. ಕಲ್ಲಡ್ಕ, ನಿರ್ದೇಶಕಿ, ಕಿನ್ನರಿ ಕಿಂಡರ್‌ಗಾರ್ಟನ್, ಕೊಂಚಾಡಿ
ಖಾಸಗಿ ಹೂಡಿಕೆ ನಡೆಯಬೇಕು
ಕಳೆದ ೧೫ ವರ್ಷಗಳಿಂದ ಈಚೆಗೆ ಖಾಸಗಿ ಬಂಡವಾಳದಾರರು ತಮ್ಮ ಹೂಡಿಕೆಯನ್ನು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಂದರೆ ಇಲ್ಲಿನ ಶಿಕ್ಷಣ ಒಂದು ಬೆಳೆಯುತ್ತಿರುವ ಉದ್ಯಮವಾಗುತ್ತಿದೆ. ಬಂಡವಾಳದಾರರು ತಮ್ಮ ಹೂಡಿಕೆಗೆ ಬೇಗನೆ ಲಾಭ ಬರಬೇಕೆನ್ನುವ ಉದ್ದೇಶ ದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಇದೇ ರೀತಿಯ ಬಂಡವಾಳ ಹೂಡಿಕೆ ಪ್ರವಾಸೋದ್ಯಮ ಕ್ಷೇತ್ರದಲ್ಲೂ ನಡೆದರೇ ನಿಜಕ್ಕೂ ಟೂರಿಸಂ ಕ್ಲಿಕ್ ಆಗುವುದರಲ್ಲಿ ಡೌಟ್ ಇಲ್ಲ. ಬೆಳೆಯುತ್ತಿರುವ ಮಂಗಳೂರಿಗೆ ಜನರ ವಲಸೆ ಹೆಚ್ಚದಂತೆ ಟೂರಿಸಂ ಕೂಡ ಬೆಳೆಯಬೇಕೆನ್ನುವುದು ಒಂದು ವಾದ . ಆದರೆ ಇಂತಹ ಬೆಳವಣಿಗೆ ಆಗುತ್ತಿಲ್ಲ ಎನ್ನೋದೇ ದುರದೃಷ್ಟಕರ.
- ಮೇರಿವೇಲು, ಪತ್ರಕರ್ತರು
ನೀತಿ ನಿಯಮ ಜಾರಿಯಾಗಲಿ
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದೆ. ಆದರೆ ಈ ಬೆಳವಣಿಗೆ ಪರಿಸರಕ್ಕೆ ಪೂರಕವಾಗಿ ನಡೆಯಬೇಕು. ಸ್ಥಳೀಯ ಜನರನ್ನು ಇದರಲ್ಲಿ ಭಾಗವಹಿ ಸುವಂತೆ ಮಾಡಬೇಕು. ಇದಕ್ಕಾಗಿ ಸರಕಾರ ಹಾಗೂ ಖಾಸಗಿ ವಲಯದಲ್ಲೂ ಸರಿಯಾದ ಚರ್ಚೆಗಳು, ಯೋಜನೆಗಳು ಕಾರ್ಯ ರೂಪಕ್ಕೆ ತರುವಂತಹ ಕೆಲಸ ನಡೆಯಬೇಕು. ಸರಕಾರದ ಕಡೆಯಿಂದ ಪ್ರವಾಸೋದ್ಯಮ ನೀತಿ- ನಿಯಮಾ ವಳಿಗಳನ್ನು ಜಾರಿಗೆ ತರುವ ಅಗತ್ಯವಿದೆ.
ಟಿ.ಎನ್. ಶ್ರೀಧರ್, ಮುಖ್ಯಸ್ಥರು, ಎಂಟಿಎ ವಿಭಾಗ
ಮಂಗಳೂರಿನ ಮುನ್ನಡೆಗೆ ಬೇಕು ದಕ್ಷ ಅಕಾರಿಗಳ ಪಡೆ
`ಮಂಗಳೂರಿನ ಮುನ್ನಡೆಗೆ ವಿಜಯಕರ್ನಾಟಕದ ನಡೆ' ಕರಾವಳಿಯ ಪತ್ರಿಕಾ ರಂಗದಲ್ಲಿ ಮಹತ್ವದ ಮೈಲಿಗಲ್ಲು . ಅವಿಭಜಿತ ದ.ಕ ಜಿಲ್ಲೆಗೆ ವಿಜಯಕರ್ನಾಟಕ ಪ್ರವೇಶಿಸಿದ ದಿನದಿಂದಲೇ ಜನಸಾಮಾನ್ಯರು ವಿಜಯಿಗಳಾಗಲು ಹಾತೊರೆದರು. ಪತ್ರಿಕೆ ಕರಾವಳಿಯ ಓದುಗರಿಗೆ ದಾರಿದೀಪ, ಮಾರ್ಗದರ್ಶಕ ಹಾಗೂ ಬಂಧುವಾಗಿ ಸಾರ್ಥಕ ದಶವರ್ಷಗಳನ್ನು ಪೂರೈಸಿದೆ. ಪತ್ರಿಕೆ ಈಗ ಆರಂಭಿಸಿರುವ `ಮುಂದೆ ಹೋಗೋಣ ಮಂಗಳೂರು' ಲೇಖನ ಮಾಲಿಕೆಯಂತೂ ಉತ್ಕೃಷ್ಟ ಹೆಜ್ಜೆ! ಈ ಯೋಜನೆಯನ್ನು ರೂಪಿಸಿ ಮುನ್ನಡೆಸಿದ ಎಲ್ಲಾ ವಿಜಯಕರ್ನಾಟಕದ ಲೇಖಕ ಮಂಡಳಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅದರಲ್ಲೂ ನಮ್ಮತನ ಮರೆಯಬಾರದು ಎಂದು ಎಚ್ಚರಿಸುವ ಮೂಲಕ ಇದರ ನೇತೃತ್ವ ವಹಿಸಿದ ಸ್ಥಾನೀಯ ಸಂಪಾದಕರ ನುಡಿ ಅಭಿನಂದನೀಯ.
ಹಲವು ವರ್ಷಗಳಿಂದ ಹವ್ಯಾಸಿ ಬರಹಗಾರ, ರೇಡಿಯೋ ಕಲಾವಿದನಾಗಿ ನನ್ನ ಆಲೋಚನೆ - ಯೋಜನೆ- ಯೋಜನೆಗಳನ್ನು ಅಭಿವ್ಯಕ್ತಗೊಳಿಸಿದ್ದೇನೆ. ಪ್ರಸ್ತುತ ಜಿಲ್ಲೆಯ ಅದರಲ್ಲೂ ಮಂಗಳೂರಿನ ನಗರ ರಸ್ತೆ ಸಂಚಾರದ ಬಗ್ಗೆ ಸಂಶೋಧನಾ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನಗರ ಸಮಾಜಶಾಸ್ತ್ರದ ನಗರ ಸಾರಿಗೆ ಅದರಲ್ಲೂ ರಸ್ತೆಗಳ ವ್ಯವಸ್ಥೆ ಬಗ್ಗೆ ಎಂ.ಫಿಲ್ ಅಧ್ಯಯನಕ್ಕೆ ಆಯ್ಕೆ ಮಾಡಿದ್ದೇನೆ. ಬಹಳಷ್ಟು ವಾಸ್ತವ ಸಂಗತಿಗಳು `ಮಂಗಳೂರು ಮುನ್ನಡೆ'ಯಲ್ಲಿ ಪ್ರಕಟವಾಗಿದೆ. ಸಂತೋಷ. ಜನಪ್ರತಿನಿ ಮತ್ತು ಜನಸಾಮಾನ್ಯರಲ್ಲಿ ಪ್ರಜ್ಞೆ ಮೂಡಿಸಿ ಚಿಂತಿಸಲು ಕಾರ್ಯೋನ್ಮುಖರಾಗಲು ಪ್ರೇರಣೆ ನೀಡಿದೆ.
ಆದರೆ, ಮಂಗಳೂರಿನ ಬೆಳವಣಿಗೆ - ಅಭಿವೃದ್ಧಿ ಏಕೆ ಪಕ್ಷೀಯವಾಗಿದೆ. ದೇಹದ ಯಾವುದೇ ಒಂದು ಭಾಗ ವಿಪರೀತ ಬೆಳೆದಂತೆ ಉಂಟಾಗುವ ದುಷ್ಪರಿಣಾಮಗಳೇ ಇಂದು ಮಂಗಳೂರನ್ನು ಕಾಡುತ್ತಿವೆ. ಬೆಳವಣಿಗೆ - ಅಭಿವೃದ್ಧಿ ಒಂದೇ ಕಡೆ ಆಗಿರುವುದರಿಂದ ಹಂಪನಕಟ್ಟೆ ಯ ಸರಹದ್ದು ಮಾತ್ರ ಮಂಗಳೂರು ಆಗಿದೆ. ಇದರ ಪರಿಣಾಮಗಳ ಕೆಲವು ಸ್ಯಾಂಪಲ್‌ಗಳು ಇಲ್ಲಿವೆ:
ನನ್ನ ಗೆಳೆಯರೊಬ್ಬರು ಕೆಲವು ವರ್ಷಗಳ ಹಿಂದೆ ಕೇಂದ್ರ ತರಕಾರಿ ಮಾರುಕಟ್ಟೆಯಲ್ಲಿ ನುಗ್ಗೇಕಾಯಿಯ ಬೆಲೆ ತಿಳಿದು ಹೌಹಾರಿದರು. ಕಾರಣ ಅವರು ವಾಸಿಸುವ ಪುತ್ತೂರು ಕಡಬದಲ್ಲಿ ನುಗ್ಗೆ ಸುಮ್ಮನೆ ಬಿದ್ದು ಹಾಳಾಗಿ ಹೋಗುತ್ತದೆ. ಮಾರಾಟಗಾರರಲ್ಲಿ ಮಾತಾಡಿ ರೂಪಾಯಿ ೫೦/- ಕೆ.ಜಿ. ಒಂದಕ್ಕೆ ಪಡೆಯುವನೆಂಬ ಹುರುಪಿನಿಂದ (ಮಾರುಕಟ್ಟೆ ಬೆಲೆ ರೂಪಾಯಿ ೬೫/- ಇತ್ತು) ೨-೩ ಗೋಣಿಗಳಲ್ಲಿ ನುಗ್ಗೇಕಾಯಿ ತಂದರು. ಮಾರುಕಟ್ಟೆಯ ಎಲ್ಲಾ ಮಾರಾಟಗಾರರು ತಮ್ಮ ತಮ್ಮಲ್ಲಿ ಮಾತಾಡಿ ರೂಪಾಯಿ ೫೦/- ಬೆಲೆ ನೀಡಲು ನಿರಾಕರಿಸಿದರು. ಕೊನೆಗೆ ಸಾಗಣಿಕೆ ಖರ್ಚು ವೆಚ್ಚ ಸರಿಯಾಗಿಸಲು ಇತರರ ಸಲಹೆಯಂತೆ ಕೃಷಿ ಸಹಕಾರಿ ಕೇಂದ್ರಕ್ಕೆ ನುಗ್ಗೇಕಾಯಿ ಮಾರಿ ಶ್ರಮ, ಸಮಯ ಉಳಿಸಿಕೊಂಡರು. ಲಾಭವೇನೂ ಅವರಿಗೆ ದೊರೆಯಲಿಲ್ಲ
ಪಂಪ್‌ವೆಲ್‌ನಿಂದ ಎರಡೂವರೆ ಕಿ.ಮೀ. ದೂರವಿರುವ ಬಜಾಲ್‌ನ (ಮೂಡಾ) ಮಂಗಳೂರು ನಗರಾಭಿವೃದ್ಧಿ ಪ್ರಾಕಾರದ ಪ್ರಗತಿ ನಗರ ಬಡಾವಣೆಗೆ ಹಲವು ವರ್ಷಗಳಿಂದ ಒಂದೇ ಒಂದು ಸಿಟಿ ಬಸ್ ಓಡುತ್ತಿದೆ. ಜನಸಂಖ್ಯೆ ಏರಿದೆ. ಕೇವಲ ಎರಡೂವರೆ ಕಿ.ಮೀ ದೂರ ಕ್ರಮಿಸಲು ರಿಕ್ಷಾದವರು ಹಗಲು ಹೊತ್ತಿನಲ್ಲೇ ೫೦ ರೂಪಾಯಿ ಪೀಕಿಸುತ್ತಾರೆ. ಪ್ರಯಾಣಿಕರ ಸಂಖ್ಯೆ ವೃದ್ಧಿಸಿದ್ದರೂ ಅದಕ್ಕೆ ಅನುಗುಣ ಸಾರಿಗೆ ಇಡೀ ನಗರದ ಎಲ್ಲಾ ವಿಭಾಗಗಳಲ್ಲಿ ವ್ಯವಸ್ಥೆಯಾಗಿಲ್ಲ. ವ್ಯವಸ್ಥೆಯಾಗಿರುವುದು ಎಲ್ಲಾ ಹಂಪನಕಟ್ಟೆಯ ಸರಹದ್ದಿನ ವಿಭಾಗಗಳಲ್ಲಿ ಮಾತ್ರ.
ನೀರಿನ ವ್ಯವಸ್ಥೆ : ಇಂದಿಗೂ ಬಜಾಲ್‌ನ ಪ್ರಗತಿ ನಗರದಲ್ಲಿ ಕೊಳವೆ ಬಾವಿಯ ಕೆಸರು ನೀರು ಸರಬರಾಜು ಆಗುತ್ತಿದೆ. ನಗರದ ಇತರ ವಿಭಾಗಗಳಲ್ಲೂ ನೀರು ಪೂರೈಕೆ ಸರಿಯಾಗಿಲ್ಲ.
ಮೇಲಿನ ಮೂರು ಘಟನೆಗಳು ನಗರ ಅಭಿವೃದ್ಧಿಯ ಪಕ್ಷಿನೋಟ ನೀಡುತ್ತವೆ. ಒಟ್ಟು ೬೦ ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳು ಮಹಾನಗರಪಾಲಿಕೆ ಆಡಳಿತ ವ್ಯವಸ್ಥೆ ಬಂದ ಬಳಿಕ ನಿರೀಕ್ಷಿತ ಅಭಿವೃದ್ಧಿ ಸಾಸಿಲ್ಲ. ಯೋಜನೆ ಅಭಿವೃದ್ಧಿಯ ಬಗ್ಗೆ ಬಹಳಷ್ಟು ಕಾರ್ಯಗಳು ನಗರ ಕೇಂದ್ರಕ್ಕೆ ಸೀಮಿತವಾಗಿದೆ. ಹಂಪನಕಟ್ಟೆಯಿಂದ ೪-೫ ಕಿ.ಮೀ. ದೂರವಿರುವ ವಿಭಾಗದಲ್ಲಿ ಬೆಳೆಯುವ ತರಕಾರಿ ಉತ್ತಮ ಬೆಲೆ ಪಡೆಯಬೇಕಾದರೆ ಹಂಪನಕಟ್ಟೆಗೆ ಬರಬೇಕು.
ನಗರ ಯೋಜನೆ ಕ್ರಮಬದ್ಧವಾಗಿರದೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ನಗರ ಕೇಂದ್ರದಲ್ಲಿರುವ ಒತ್ತಡದ ಸಮೂಹಗಳು (Pಛಿooಛಿ ಎಟ್ಠmo) ಯೋಜನಾ - ಆಡಳಿತದ ಮೇಲೆ ಪ್ರಭಾವ ಬೀರಿ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತ್ತವೆ. ಪ್ರಸ್ತುತ ಬೆಳೆಯುತ್ತಿರುವ ಮಂಗಳೂರು ಹಲವು ಮಂದಿಯನ್ನು ತನ್ನೆಡೆಗೆ ಸೆಳೆದಿದೆ. ಈ ಹಿಂದೆ ಇದ್ದ ಏಕಸ್ವಾಮ್ಯದ ಮಾರುಕಟ್ಟೆ ನಿಧಾನಗತಿಯಲ್ಲಿ ಬದಲಾಗುತ್ತಿದೆ. ಆದರೆ ಇದರಿಂದಾಗಿ ಮಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಯಾಗುವುದಿಲ್ಲ. ನಗರ ಕೇಂದ್ರದ ಸುತ್ತ ಎಲ್ಲರೂ ಗಿರಕಿ ಹೊಡೆಯುತ್ತಿರುವುದರಿಂದ ಇಲ್ಲಿನ ಭೂಮಿ, ಸೇವೆ, ಮನೆ, ಕಚೇರಿ ಇತ್ಯಾದಿ ಇತ್ಯಾದಿ ದುಬಾರಿಯಾಗಿದೆ.
ಕಾರಿಡಾರ್ ಯೋಜನೆ, ಸ್ಕೈಬಸ್ ಮೊದಲಾದ ಆಕರ್ಷಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮಹತ್ವ ಪಡೆಯಬೇಕಾದರೆ ಮಂಗಳೂರಿನ ಸಮಗ್ರ ಅಭಿವೃದ್ಧಿಯಾಗಬೇಕು. ಅಕ್ಷಯಮಯವಾಗಬೇಕಾದ ಪ್ರಾಕೃತಿಕ, ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳು ಕೇವಲ ಕೆಲವು ಯೋಜನೆಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸಮಗ್ರ ಅಂಶಗಳು ಅಥವಾ ಕ್ಷೇತ್ರಗಳನ್ನು ಒಗ್ಗೂಡಿಸಿ ಅಭಿವೃದ್ಧಿಯಾಗಬೇಕು.
ನೀರು, ರಸ್ತೆ, ಕೈಗಾರಿಕೆ, ಪ್ರವಾಸ ಉದ್ಯಮ, ಕಲೆ- ಸಂಸ್ಕೃತಿ ಇತ್ಯಾದಿ ಕ್ಷೇತ್ರಗಳು ಬಿಡಿಬಿಡಿಯಾಗಿ ಅಭಿವೃದ್ಧಿ ಸಾಸಲು ಸಾಧ್ಯವಿಲ್ಲ. ಒಂದಕ್ಕೊಂದು ಸಂಬಂಧವಿರುವ ಎಲ್ಲ ಕ್ಷೇತ್ರಗಳ ಸಮೃದ್ಧಿ ಯಾಗಬೇಕು. ನಮ್ಮಲ್ಲಿರುವ ಪ್ರಾಕೃತಿಕ ಸಂಪನ್ಮೂಲ ಉಳಿಸುವ - ಬೆಳೆಸುವ, ಆರ್ಥಿಕ ಸಂಪನ್ಮೂಲ ಆಕರ್ಷಿಸುವ ಮತ್ತು ಮಾನವ ಸಂಪನ್ಮೂಲ ತೊಡಗಿಸಿಕೊಳ್ಳುವ ಬಗ್ಗೆ ಎಲ್ಲರಲ್ಲೂ ಕಳಕಳಿಯಿದ್ದಲ್ಲಿ ನಮ್ಮ ಕರಾವಳಿ ಜಪಾನ್ ಮಾದರಿಯ ಅಭಿವೃದ್ಧಿ ಸಾಸಲು ಸಾಧ್ಯವಿದೆ.
ಕಾಲಮಿತಿಯ ಯೋಜನಾಬದ್ಧ ಕಾರ್ಯಗಳು ಜಾರಿಗೆ ಬರುವಂತೆ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಅಭಿವೃದ್ಧಿ ಮೂಲಕ ಸಮೃದ್ಧಿ ಸಾಸಿ ಇಂದು - ನಾಳೆಯ ಜನಾಂಗಗಳಿಗೆ ನೆರವಾಗುವ - ಆಧಾರವಾಗುವ ಕೆಲಸಗಳು ಆಗಬೇಕಾಗಿದೆ. ಉದಾಹರಣೆಗೆ ಬ್ರಿಟಿಷರು ಈ ದೇಶವನ್ನು ಕೊಳ್ಳೆ ಹೊಡೆದರು. ಪ್ರಾಕೃತಿಕ ಸಂಪತ್ತನ್ನು ದೋಚಿದರು. ಆದರೆ ಅವರು ಸಮೃದ್ಧಿ (ವೈಯಕ್ತಿಕ) ಒಳ್ಳೆಯ ಕಟ್ಟಡ, ರಸ್ತೆ, ಸೇತುವೆ ಇತ್ಯಾದಿ ಕಟ್ಟಿದರು. ಅವು ಇಂದಿಗೂ ನಮ್ಮನ್ನು ಅಣಕಿಸುತ್ತವೆ. ಅವರಲ್ಲಿ ದೂರದೃಷ್ಟಿಯಿತ್ತು. ನಮ್ಮಲ್ಲಿ...?
- ವಾಸುದೇವ ಕಾಮತ್ ಕೆ.
ರಸ್ತೆ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಹಾಕರ್ಸ್ ಝೋನ್
`ಮುಂದೆ ಹೋಗೋಣ ಮಂಗಳೂರು' ಲೇಖನ ಮಾಲಿಕೆ ಅತಿ ಶ್ಲಾಘನೀಯ. ಇವೆಲ್ಲವೂ ಕಾರ್ಯಗತವಾಗಬೇಕಾದರೆ ಕೇಂದ್ರ, ರಾಜ್ಯ, ಮತ್ತು ಸ್ಥಳೀಯ ಸರಕಾರಗಳು, ಅವರೊಂದಿಗೆ ಊರ ಜನರು ಮುಂದೆ ಬಂದರೆ ಮಾತ್ರ ಸಾಧ್ಯ. ಯಾವುದೇ ನಗರದ ಅಭಿವೃದ್ಧಿಯನ ಅಳೆಯುವುದು ಅಲ್ಲಿನ ರಸ್ತೆಗಳ ಗುಣಮಟ್ಟ ಮತ್ತು ಪ್ರಮಾಣತೆಯನ್ನು ನೋಡಿ. ಮಾರ್ಗಗಳು ಎಷ್ಟೇ ಉತ್ತಮವಿದ್ದರೂ ಅವು ಬೀದಿ ಬದಿ (eZಡಿhಛ್ಟಿo) ವ್ಯಾಪಾರಿಗಳಿಂದ ತುಂಬಿದ್ದು, ಪಾದಚಾರಿಗಳಿಗೆ, ವಾಹನಮಾಲಿಕರಿಗೆ ಉಪದ್ರವಗಳನ್ನು ನೀಡುವುದಾದರೆ ಅಂತಹ ನಗರಗಳ ಗುಣಮಾಪನೆ ಅನವಶ್ಯಕ. ಅಂತಹ ನಗರಗಳು ಅಭಿವೃದ್ದಿ ಹೊಂದಲು ಸಾಧ್ಯವೇ ಇಲ್ಲ. ಮುಂಬಯಿ ನಗರ ಅಂತಹ ಬೀದಿ ಬದಿಗಳಿಂದ ಮುಕ್ತರಾಗಬೇಕಾದರೆ ೫೦ ವರ್ಷಗಳು ಬೇಕಾಯಿತು. ಮಂಗಳೂರು ನಗರಾಕಾರಿಗಳು ರಾಜಕೀಯ, ಮತ್ತಿತರ ಜಾತಿ ಧರ್ಮಗಳ ಒತ್ತಡಕ್ಕೆ ಮಣಿದು ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ. ಮುಖ್ಯ ರಸ್ತೆಗಳು ಈ ವ್ಯಾಪಾರಿಗಳಿಂದ ಮುಕ್ತವಾಗಲೇಬೇಕು. ಸರಕಾರ ಮತ್ತು ಇತರ ನಾಗರಿಕ ಸಂಸ್ಥೆಗಳು ಈಗಿನಿಂದಲೇ ಒತ್ತಡವನ್ನು ತರದಿದ್ದರೆ ವಾಹನಗಳು ಚಲಿಸಲು ಸಾಧ್ಯವೇ ಇಲ್ಲ. ಪಾದಚಾರಿಗಳಿಗಂತೂ ನಡಿಗೆ ಬಲುಕಷ್ಟ.
ಅಂತಹ ವ್ಯಾಪಾರಿಗಳಿಗಾಗಿ, ಸರಕಾರ ಖಾಲಿ ಜಾಗವನ್ನು ನಿಗದಿ ಮಾಡಿ ಅಲ್ಲಿ ಅವರನ್ನು ಸ್ಥಳಾಂತರಿಸುವುದು ಉಚಿತ. ಅಂತಹ ಸ್ಥಳಗಳನ್ನು (eZಡಿhಛ್ಟಿo ಟ್ಞಛಿ) ನಗರದ ನಾನಾ ಕಡೆಗಳಲ್ಲಿ ಸ್ಥಾಪಿಸಿದರೆ, ಸಾಮಾನ್ಯ ಜರಿಗೆ, ವಾಹನ ಮಾಲಿಕರಿಗೆ ಮಾತ್ರ ಸಹಾಯವಾಗುವುದಲ್ಲದೆ ನಗರದ ಸೌಂದರ್ಯವನ್ನೂ ಹೆಚ್ಚಿಸಬಹುದು. ಮುಖ್ಯವಾಗಿ ಅಂತಹ ಬೀದಿಬದಿ ವ್ಯಾಪಾರಿಗಳನ್ನು ಗೌರವದಿಂದ ಸ್ಥಳಾಂತರಿಸಿದಂತಾಗುವುದು. ಎರಡನೆಯದಾಗಿ, ಸ್ಥಳಾಂತರಗೊಳಿಸಿದ ಆ ಸ್ಥಳಗಳಲ್ಲಿ, ಬೀದಿ ಬದಿ ವ್ಯಾಪಾರಿಗಳ ಮೇಲೆ ತೆರಿಗೆಯನ್ನೂ ಹೇರಿಸುವುದರಿಂದ ಖಜಾನೆಗೂ ಲಾಭವಿದೆ.
ರವೀಂದ್ರ ಕಾಸರಗೋಡು, ಕ್ಯಾಪ್ಟನ್, (ನಿವೃತ್ತ )ಅಶೋಕನಗರ ಮಂಗಳೂರು.
ಶನಿವಾರ, ನವೆಂಬರ್ 1, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ