ಮಂಗಳೂರು ಸುತ್ತಲಿನ ಪುರಾತನ ಕೆರೆಗಳನ್ನು ಸಂರಕ್ಷಿಸಬೇಕಾದ ತುರ್ತು ಇದೀಗ ಇದೆ. ತುಂಬೆಯ ನೀರು ಮಂಗಳೂರಿನ ಕುಡಿಯುವ ನೀರಿನ ದಾಹವನ್ನು ತೀರಿಸುತ್ತದೆ ನಿಜ, ಆದರೆ ನಗರದ ಅಂತರ್ಜಲವನ್ನು ರಕ್ಷಿಸುವ ನಿಟ್ಟಿನಲ್ಲಿ ಇಲ್ಲಿನ ಕೆರೆಗಳ ಜೀರ್ಣೋದ್ಧಾರ ನಡೆಯಬೇಕಾಗಿದೆ. ಅಲ್ಲದೆ ಪ್ರಾಚೀನ ಕೆರೆಗಳನ್ನು ಸಂರಕ್ಷಿಸುವುದು ನಗರದ ಘನತೆಯನ್ನೂ ಹೆಚ್ಚಿಸುತ್ತದೆ.
ಮಂಗಳೂರಿನ ಸುತ್ತಲೂ ಇರುವ ಪುರಾತನ ಕೆರೆಗಳಾದ ಅತ್ತಾಚರದ ಗುಜ್ಜರ ಕೆರೆ, ಎಮ್ಮೆಕೆರೆ, ಅರೆಕೆರೆ, ತಾವರೆ ಕೆರೆ, ಓಣಿಕೆರೆ, ಮೋಯ್ಲಕೆರೆ, ಕಾವೂರು ಕೆರೆ, ಪಡೀಲಿನ ಬೈರಾಡಿ ಕೆರೆ ಈ ಎಲ್ಲ ಕೆರೆಗಳೂ ಒಂದು ಕಾಲದಲ್ಲಿ ಮಂಗಳೂರಿನ ಕುಡಿಯವ ಹಾಗೂ ಮತ್ತಿತರ ಬಳಕೆಯೆ ನೀರಿನ ದಾಹವನ್ನು ಇಂಗಿಸಿದ ಪುಣ್ಯತಾಣಗಳು. ಆದರೆ ಈಗ ಏನಾಗಿದೆ ?
ಹೆಚ್ಚಿನ ಕೆರೆಗಳು ಹೆಸರಿಗೆ ಮಾತ್ರವೇ ಇವೆ-ಅಥವಾ ಹೆಸರು ಮಾತ್ರ ಇವೆ ಎಂಬಂತಾಗಿದೆ. ಹೂಳು ತೆಗೆಯದೇ ಇರುವುದು, ಒತ್ತುವರಿ ಮಾಡಿರುವುದು, ತ್ಯಾಜ್ಯ ಗುಂಡಿಯಾಗಿ ಈ ಕೆರೆಗಳನ್ನು ಬಸುವುದು ಸೇರಿದಂತೆ ಹಲವಾರು ಬೇಜವಾಬ್ದಾರಿ ಕೆಲಸಗಳಿಂದ ಇವು ಸಂಕಷ್ಟ ಸ್ಥಿತಿಯಲ್ಲಿವೆ.
ಗುಜ್ಜರ ಕೆರೆ :
ಈ ನಿಟ್ಟಿನಲ್ಲಿ ಗುಜ್ಜರ ಕೆರೆಯ ಜೀರ್ಣೋದ್ಧಾರಕ್ಕೆ ನಮ್ಮ ಸಮಿತಿಯ ಆಶರಯದಲ್ಲಿ ಪ್ರಾಥಮಿಕ ಕೆಲಸಗಳು ಆಗಿದ್ದವಾದರೂ, ಇದೀಗ ನೆನೆಗುದಿಗೆ ಬಿದ್ದಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಜಪ್ಪು ಮಾರುಕಟ್ಟೆ ಹತ್ತಿರ `ಗುಜ್ಜರ ಕೆರೆ` ಇದೆ. ಗುರು ಜನರ ಕೆರೆ ಎಂದು ಪುರಾತನ ಕಾಲದಿಂದಲೂ ಈ ಕೆರೆ ಮಂಗಳೂರಿನ ಗತ ವೈಭವಕ್ಕೊಂದು ಸಾಕ್ಷಿ. ಕರ್ನಾಟಕ ಸರಕಾರ ಪಾಳು ಬಿದ್ದ ಕೆರೆಗಳ ಸಂರಕದಷಣೆಗೆ ಹಮ್ಮಿಕೊಂಡ `ನಮ್ಮ ಕೆರೆ ನಮ್ಮ ಹಕ್ಕು' ಎಂಬ ಹೆಸರಿನ ಜಲ ಸಂವರ್ಧನಾ ಯೋಜನೆಯ ಹಿನ್ನೆಲೆಯಲ್ಲಿ ಗುಜ್ಜರ ಕೆರೆಯ ಸಂರಕ್ಷಣೆಗೆ ನಾವು ಕನಸು ಕಂಡೆವು. ಯೋಜನೆಯ ಮಾರ್ಗದರ್ಶನದಂತೆ ಗುಜ್ಜರ ಕೆರೆ ತೀರ್ಥ ಸಂರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ಒಕ್ಕೂಟ ಮಾಡಿ ಜಿಲ್ಲಾ ನೋಂದಣಾಕಾರಿಗಳ ಸಮ್ಮುಖದಲ್ಲಿ ವೇದಿಕೆಯನ್ನು ರಿಜಿಸ್ಟರ್ ಮಾಡಿಸಲಾಯಿತು. ಸಮಿತಿಯ ಮೂಲಕ ಗುಜ್ಜರ ಕೆರೆ ಸಂರಕ್ಷಣೆಗೆ ಮನವಿ ಅರ್ಪಿಸಿದಾಗ ಸಣ್ಣ ನೀರಾವರಿ ಇಲಾಖೆಯಿಂದ ೨ .೩೦ ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಕೋರಲಾಯಿತು. ೨೦೦೧ರಲ್ಲೇ ಇದೆಲ್ಲ ನಡೆದು ಈ ಭಾಗದ ಸಂಸದರು, ಶಾಸಕರು ಎಲ್ಲರಿಗೂ ಈ ವಿಷಯವನ್ನು ಆಗಾಗ ನೆನಪಿಸುತ್ತ ಇದ್ದೇವೆ. ಆದರೆ ನಾವಂದುಕೊಂಡ ಕೆಲಸ ಮಾತ್ರ ಚುರುಕಾಗಿ ಆಗುತ್ತಿಲ್ಲ.
ವಾಸ್ತವದಲ್ಲಿ ಕೆರೆ ೩.೪೩ ಎಕ್ರೆ ವಿಸ್ತೀರ್ಣ ಇದೆ ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಆದರೆ ಇದೀಗ ಹೂಳು ತುಂಬಿದ್ದು, ಜನರು ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಸಾರ್ವಜನಿಕರ ವಿಚಾರ ಹಾಗಿರಲಿ, ಮಹಾನಗರ ಪಾಲಿಕೆ ಕೂಡ ಈ ಕೆರೆಯ ನಿಟ್ಟಿನಲ್ಲಿ ಒಂದಿಷ್ಟು ಬೇಜವಾಬ್ದಾರಿ ಪ್ರದರ್ಶಿಸಿತು. ಒಮ್ಮೆ ಇಲ್ಲಿ ಹಾದು ಹೋಗುತ್ತಿದ್ದ ಒಳ ಚರಂಡಿ ಪೈಪ್ ಒಡೆದಾಗ ತ್ಯಾಜ್ಯವನ್ನೇ ಇದಕ್ಕೆ ಹರಿಬಿಡಲಾಯಿತು. ಈ ವಿಷಯವನ್ನು ಪಾಲಿಕೆಯ ಗಮನಕ್ಕೂ ತರಲಾಯಿತು.
ಅಷ್ಟೆಲ್ಲ ಆದರೂ ಗುಜ್ಜರ ಕೆರೆಯ ಜೀರ್ಣೋದ್ಧಾರ ಕಾರ್ಯ ಮಾತ್ರ ಯೋಜನೆಯ ರೂಪದಿಂದ ಕಾಮಗಾರಿ ರೂಪಕ್ಕೆ ಬರುತ್ತಿಲ್ಲ.
ಇನ್ನಾದರೂ ಗುಜ್ಜರ ಕೆರೆಯನ್ನು ಯಾರೂ ಯಾವ ಕಾಲಕ್ಕೂ ಅತಿಕ್ರಮಿಸದಂತೆ ನೋಡಿಕೊಳ್ಳುಬೇಕು, ಆದಷ್ಟು ಬೇಗನೆ ಇದನ್ನು ಜೀರ್ಣೋದ್ಧಾರ ಮಾಡಬೇಕು ಎಂಬುದು ಗುಜ್ಜರ ಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಆಗ್ರಹವಾಗಿದೆ.
ವಿಜಯ ಕರ್ನಾಟಕ ಕೈಗೊಂಡ ಮುಂದೆ ಹೋಗೋಣ ಮಂಗಳೂರು ಆಂದೋಲನದ ಮೂಲಕ ಇಲ್ಲಿನ ಪುರಾತನ ಕೆರೆಗಳಿಗೆಲ್ಲ ಕಾಯಕಲ್ಪ ಆಗಲಿ ಎಂದು ನಾವು ಹಾರೈಸುತ್ತೇವೆ.
ಪಿ. ನೇಮು ಕೊಟ್ಟಾರಿ
ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ
ಮಂಗಳೂರು
ಶನಿವಾರ, ನವೆಂಬರ್ 1, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ