ಶುಕ್ರವಾರ, ಅಕ್ಟೋಬರ್ 24, 2008

ಮೀನುಗಾರಿಕೆ ಅಭಿವೃದ್ಧಿ ಅಭಿಯಾನ ಮುಂದುವರಿಯಲಿ

ರಾಜ್ಯದ ಅಭಿವೃದ್ಧಿಯಲ್ಲಿ ಮೀನುಗಾರಿಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆದರೆ ಮೀನುಗಾರರು ಮತ್ತು ಮೀನುಗಾರಿಕೆ ಬಂದರುಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ನಿರ್ಲಕ್ಷ್ಯ ಮನೋಭಾವ ತಾಳಿದೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಕರಾವಳಿಯ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ವಿಜಯ ಕರ್ನಾಟಕ ಆರಂಭಿಸಿರುವ ಅಭಿಯಾನ ಶ್ಲಾಘನೀಯ. ಪತ್ರಿಕೆಯ ಇಂತಹ ಕ್ರಾಂತಿಕಾರಕ ಅಭಿಯಾನವು ಇನ್ನು ಮುಂದುವರಿದು ಮೀನುಗಾರಿಕೆ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಸಮಗ್ರ ಚಿತ್ರಣವನ್ನು ನೀಡಿ, ಸರಕಾರ ಈ ದಿಶೆಯಲ್ಲಿ ಕೆಲವೊಂದು ದಿಟ್ಟ ನಿರ್ಧಾರವನ್ನು ಕೈಗೊಳ್ಳುವಂತಾಗಬೇಕು.
ಮೀನುಗಾರಿಕೆ ಬಂದರು ಪ್ರದೇಶಗಳ ಸಂಪರ್ಕ ರಸ್ತೆಗಳ ಸ್ಥಿತಿಗತಿ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಮಹಿಳಾ ಮೀನುಗಾರರ ಸಮಸ್ಯೆ, ಶೀತಲೀಕರಣ ವ್ಯವಸ್ಥೆ ಮೊದಲಾದುವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಈ ಸಮಸ್ಯೆಗಳ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಒದಗಿಸಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಅಲ್ಲದೆ ಸರಕಾರ ಮೀನುಗಾರಿಕೆ ಕ್ಷೇತ್ರಕ್ಕೆ ನಿಗದಿಪಡಿಸಿದ ಅನುದಾನವನ್ನು ಹೆಚ್ಚಿಸಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಿದರೆ ಮೀನುಗಾರರ ಬಾಳು ಹಸನಾಗಲು ಸಾಧ್ಯ. ಆಳ ಸಮುದ್ರ ಮೀನುಗಾರಿಕೆ ಬಗ್ಗೆ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಅಳಿವೆ ಹೂಳೆತ್ತುವುದು, ಡೀಸೆಲ್ ಹಾಗೂ ಸೀಮೆ ಎಣ್ಣೆ ಸಬ್ಸಿಡಿ, ಸಂಕಷ್ಟ ಪರಿಹಾರ ನಿ ಮೊದಲಾದವುಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಬೇಕು. ಅಲ್ಲದೆ ಸ್ಥಳೀಯ ಮೀನುಗಾರರ ಪ್ರಮುಖ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಲು ಸರಕಾರ ಮುಂದಾಗಬೇಕಿದೆ.
ಈ ದಿಸೆಯಲ್ಲಿ ವಿಜಯ ಕರ್ನಾಟಕ ಆರಂಭಿಸಿದ ಅಭಿಯಾನ ಮುನ್ನುಡಿ ಬರೆದಿದ್ದು, ಇದು ನಿರಂತರವಾಗಿ ನಡೆದು ಮೀನುಗಾರರ ಸಮಸ್ಯೆಗಳು ಬಗೆಹರಿದು ಸಮಸ್ತ ಮೀನುಗಾರರ ಬಾಳಿನಲ್ಲಿ ಹೆಮ್ಮೆಯ ಪತ್ರಿಕೆಯಾಗಿ ವಿಜೃಂಭಿಸಲಿ ಎಂದು ಶುಭ ಹಾರೈಸುತ್ತೇನೆ.

-ಬಿ. ರಾಘವೇಂದ್ರ ಪೈ, ಗ್ರಾಮ ಪಂಚಾಯತ್ ಸದಸ್ಯರು, ಗಂಗೊಳ್ಳಿ.

ಕಾಮೆಂಟ್‌ಗಳಿಲ್ಲ: