ಶುಕ್ರವಾರ, ಅಕ್ಟೋಬರ್ 24, 2008

ಕಾಂಕ್ರೀಟ್ ರಸ್ತೆಗಳನ್ನು ಶುಚಿಯಾಗಿಡೋಣ

ಮಂಗಳೂರಿನ ಎಲ್ಲ ರಸ್ತೆಗಳು ಕಾಂಕ್ರೀಟೀಕರಣಗೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಕಾಂಕ್ರೀಟ್ ಹಾಸಿದ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಬಹಳ ಬೇಸರದ ಸಂಗತಿ. ಉದಾಹರಣೆಗೆ ಕೊಟ್ಟಾರ ಚೌಕಿಯಿಂದ ಬಂಟ್ಸ್ ಹಾಸ್ಟೆಲ್ ವರೆಗಿನ ರಸ್ತೆ ಸಂಪೂರ್ಣ ಕಾಂಕ್ರೀಟೀಕರಣಗೊಂಡಿದೆ. ಎಷ್ಟೋ ಕೋಟಿ ರೂಪಾಯಿ ಖರ್ಚು ಮಾಡಿರುವ ಈ ರಸ್ತೆಗಳನ್ನು ಒಮ್ಮೆ ಬಂದು ನೋಡಿ, ರಸ್ತೆ, ಫುಟ್‌ಫಾತ್‌ಗಳು ಪೂರ್ತಿ ಕಸ ಕಡ್ಡಿ , ಕಲ್ಲು, ಮಣ್ಣುಮಯವಾಗಿದೆ. ರಸ್ತೆ ಮಧ್ಯದಲ್ಲಿ ಹಾಗೂ ಫುಟ್‌ಪಾತ್‌ನಲ್ಲಿ ಹುಲ್ಲು ಗಿಡಗಳನ್ನು ಶುಚಿಮಾಡದೆ ವರುಷಗಳೇ ಸಂದಿವೆ. ರಸ್ತೆಯ ಶೋಭೆ ಹೆಚ್ಚಿಸಲು ಬೆಳೆಸಿರುವ ಗಿಡಗಳೂ ಸರಿಯಾದ ಆರೈಕೆಯಿಲ್ಲದೆ ಒಟ್ಟಾರೆಯಾಗಿ ಬೆಳೆದು ನಿಂತಿವೆ. ಕಟ್ಟಡ ಕಾಮಗಾರಿಯ ಮಣ್ಣು, ಕಲ್ಲು, ಮರಳು ಎಲ್ಲವೂ ಫುಟ್‌ಪಾತ್‌ಗಳಲ್ಲಿ ರಾಶಿಯಾಗಿ ಬಿದ್ದಿವೆ. ಜನಸಾಮಾನ್ಯರು ತಮ್ಮ ಮನೆ ಅಥವಾ ಅಂಗಡಿಯ ತ್ಯಾಜ್ಯಗಳನ್ನು ಕಸದ ಬುಟ್ಟಿಯಲ್ಲಿ ಬಿಸಾಡದೆ ರಸ್ತೆಯ ಬದಿ ಎಸೆಯುವುದರಿಂದ ರಸ್ತೆಯ ಅಂದ ಕೆಡಿಸುವಲ್ಲಿ ಎತ್ತಿದ ಕೈಯಾಗಿರುತ್ತಾರೆ. ಆದ್ದರಿಂದ ಕಾಂಕ್ರೀಟೀಕರಣಗೊಂಡ ರಸ್ತೆಗಳನ್ನು ಸಂಬಂಧಪಟ್ಟ ಅಕಾರಿಗಳು, ನಾಗರಿಕರು, ಸಂಘಸಂಸ್ಥೆಗಳು, ಅಂಗಡಿ ಮಾಲೀಕರು ಎಲ್ಲರೂ ಸೇರಿ ಶುಚಿಯಾಗಿಡುವಲ್ಲಿ ಸಹಕರಿಸಬೇಕು.
ಮಂಗಳೂರಿನ ಮುನ್ನಡೆಗೆ-
* ಕಾಂಕ್ರೀಟ್ ರಸ್ತೆಗಳಲ್ಲಿ ಬಿದ್ದಿರುವ ಕಸಕಡ್ಡಿಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಇದಕ್ಕಾಗಿ ಕಾಯಂ ನೆಲೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು.
* ಫುಟ್‌ಪಾತ್‌ಗಳನ್ನು ಕಲ್ಲುಮಣ್ಣುಗಳ ರಾಶಿಯಿಂದ ಮುಕ್ತಗೊಳಿಸಬೇಕು.
* ಪ್ರತಿಯೊಂದು ಅಂಗಡಿ, ಕಟ್ಟಡದೆದುರು ಣ್ಣದಾದರೂ ಕಸದ ತೊಟ್ಟಿಯನ್ನು ಇಡುವಂತೆ ಒತ್ತಾಯಿಸಬೇಕು.
* ಯಾರಿಗೂ ತೊಂದರೆಯಾಗದಂತೆ ರಾತ್ರಿವೇಳೆ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಸೂಕ್ತ.
* ಈ ಕಾರ್ಯಕ್ಕೆ ನಾಗರಿಕರು, ಸಂಘಸಂಸ್ಥೆಗಳು, ಜಾಹೀರಾತುದಾರರು ಮುಂದೆಬಂದರೆ ನಮ್ಮ ರಸ್ತೆಗಳು ಸುಂದರವಾಗಿಯೂ, ಶುಚಿಯಾಗಿಯೂ ಸುಸ್ಥಿತಿಯಲ್ಲಿರಬಹುದು.

ನಾಗರಾಜ್ ಶೆಟ್ಟಿ,
ಶ್ರೀಸಾಯಿ ವೈಂಡರ್‍ಸ್
ಇನ್‌ಫೋಸಿಸ್ ಎದುರುಗಡೆ
ಕೊಟ್ಟಾರ, ಮಂಗಳೂರು

ಕಾಮೆಂಟ್‌ಗಳಿಲ್ಲ: