ಮಂಗಳವಾರ, ಅಕ್ಟೋಬರ್ 21, 2008

ಪ್ರಗತಿಯನ್ನು ಹಿಂದಕ್ಕೆ ಜಗ್ಗಿದ ಫೈನಾನ್ಸ್‌ಗಳು

ಕಳೆದ ದಶಕದಲ್ಲಿ ಕರಾವಳಿಯ ಬಡವರು ಹಾಗೂ ಮಧ್ಯಮ ವರ್ಗದ ಜನರು ಬೆವರು ಸುರಿಸಿ ಗಳಿಸಿದ ಹಣವನ್ನೆಲ್ಲ ಕೆಲವರು ಫೈನಾನ್ಸ್ ಹೆಸರಲ್ಲಿ ನುಂಗಿ ನೀರು ಕುಡಿದಿದ್ದಾರೆ.
`ಮುಂದೆ ಹೋಗೋಣ ಮಂಗಳೂರು' ಲೇಖನ ಮಾಲೆಯಲ್ಲಿ ಇಂಥ ವಿಷಯದ ಬಗ್ಗೆ ಒಂದಿಷ್ಟು ಗಮನ ಸೆಳೆಯಬೇಕು. ಖಾಸಗಿ ಫೈನಾನ್ಸ್ ಹೆಸರಿನಲ್ಲಿ ಪ್ರತಿಷ್ಠಿತರ ಮುಖವಾಡದಲ್ಲಿ ಇರುವ ಕೆಲವು ಲೇವಾದೇವಿ ವ್ಯವಹಾರಸ್ಥರು ಬಡವರ ಹಣವನ್ನು ನುಂಗಿ ಈಗಲೂ ಪ್ರತಿಷ್ಠಿತರಾಗಿಯೇ ಇದ್ದಾರೆ. ಇಂಥವರಿಗೆ ಕೆಲವು ಪತ್ರಿಕೆಗಳ ಬೆಂಬಲ ಕೂಡ ಇದೆ.
ಹಣಕಾಸು ಸಂಸ್ಥೆಗಳು ಮಾಡಿದ ವಂಚನೆ ಎಷ್ಟು ತೀವ್ರವಾಗಿದೆ ಎಂದರೆ ಮಗಳ ಮದುವೆಗೆಂದು ಜೀವಮಾನವಿಡೀ ಸಂಪಾದಿಸಿದ ಹಣವನ್ನು ಫೈನಾನ್ಸ್‌ಗಳಲ್ಲಿ ಹೂಡಿದವರು ಕೊನೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ವಿಆರ್‌ಎಸ್ ಪಡೆದು ಬಂದ ಹಣವನ್ನು ಫೈನಾನ್ಸ್‌ಗಳಿಗೆ ಹಾಕಿ ನಿವೃತ್ತಿ ಜೀವನದಲ್ಲಿ ನ್ಯಾಯಾಲಯಕ್ಕೆ ಓಡಾಟ ಮಾಡುವುದನ್ನೇ ಹೊಸ ಕಾಯಕವನ್ನಾಗಿಸಿಕೊಂಡವರೂ ಇದ್ದಾರೆ.
ಠೇವಣಿ ಪಡೆದುಕೊಳ್ಳುವಾಗ ಸುಂದರ ಕನಸುಗಳನ್ನು, ಏನೆಲ್ಲ ಆಶ್ವಾಸನೆಗಳನ್ನು ನೀಡಿದ ಫೈನಾನ್ಸ್ ಮಾಲೀಕರು ಕೊನೆಗೆ ಲಾಸ್ ಆಯಿತು ಎಂದು ಕೈ ಎತ್ತಿಬಿಟ್ಟರು. ಕೆಲವೇ ಕೆಲವು ಮಠಾಶರು, ಶ್ರೀಮಂತರ ಹಣವನ್ನು ರಾತ್ರೋರಾತ್ರಿ ಹಿಂದಿರುಗಿಸಿದರೂ ಬಡವರ ಹಣವನ್ನು ಸಂಪೂರ್ಣ ಹಿಡಿಸಿದ್ದಾರೆ.
ಬಡವರ ಬಗ್ಗೆ ಕಣ್ಣೀರು ಸುರಿಸುವ ರಾಜಕೀಯ ಪಕ್ಷಗಳು ಇಂಥದ್ದೊಂದು ಮಹಾ ವಂಚನೆಯ ಬಗ್ಗೆ ಚಕಾರ ಮಾತಾಡುವುದಿಲ್ಲ. ಗ್ರಾಹಕರ ನ್ಯಾಯಾಲಯದ ತೀರ್ಪುಗಳು ಅನುಷ್ಠಾನಗೊಳ್ಳುತ್ತಿಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ವೇದಿಕೆಗಳೇ ಇಲ್ಲವಾಗಿವೆ.
ಕರಾವಳಿಯ ಬ್ಯಾಂಕ್‌ಗಳು ಉತ್ತಮ ಹೆಸರನ್ನು ಮಾಡಿದರೂ, ಫೈನಾನ್ಸ್ ಎಂಬುದು ಈಗಲೂ ಸಜ್ಜನರು ಚರ್ಚೆ ಮಾಡುವ ಸಂಗತಿಯಾಗಿಲ್ಲ. `ಮುಂದೆ ಹೋಗೋಣ ಮಂಗಳೂರು' ಆಂದೋಲನದಲ್ಲಿ ಈ ವಿಷಯದ ಮೇಲೂ ಬೆಳಕು ಚೆಲ್ಲಿದರೆ ಜನರಿಗೆ ಒಂದು ಉಪಯಕ್ತ ಎಚ್ಚರಿಕೆಯಾದೀತು.

-ಕೆ. ಎಸ್.ಎ. ಪೈ
ಮಂಗಳೂರು

ಮೆಗಾ ಊರು ಆಗಲಿ
ನಮ್ಮ ಮಂಗಳೂರು ನಮ್ಮ ಬೆಂಗಳೂರು ಆಗಿ ಮುನ್ನಡೆ ಸಾಸಿ ಮೆಗಾ ಊರು ಆಗಬೇಕಾದರೆ ಕರಾವಳಿ ಪ್ರದೇಶ ಅಭಿವೃದ್ಧಿಗೆ ಪೂರಕವಾಗಿ ಪಡುಬಿದ್ರೆ ಬಳಿ ಎಲ್ಲ ಸೌಕರ್ಯಗಳಿರುವ ಸುಂದರ ವಿಶಾಲ ಖಾಸಗಿ ಮತ್ತು ಸರಕಾರಿ ಬಸ್ ನಿಲ್ದಾಣ ಸ್ಥಾಪಿಸುವುದು ತುರ್ತು ಅಗತ್ಯ. ಅಲ್ಲಿಂದಲೇ ಮುಂದೆ ಹೋಗೋಣ- ಮಂಗಳೂರಿಗೆ, ಮೆಗಾ ಊರಿಗೆ. ಈ ಸುದ್ದಿ ಮೊದಲು ತಲುಪಲಿ ಬೆಂಗಳೂರಿಗೆ.

-ಪಿ. ಬಾಲಕೃಷ್ಣ ರಾವ್, ಮುದರಂಗಡಿ

ಕಾಮೆಂಟ್‌ಗಳಿಲ್ಲ: